ಬುಧವಾರ, ಜುಲೈ 14, 2021

ಯಾವುದು ಕತೆಯಾಗಬಲ್ಲದು: ವಾಸನೆ ಶಬ್ದ ಬಣ್ಣ ಇತ್ಯಾದಿ...?

 ಯಾವುದು ಕತೆಯಾಗಬಲ್ಲದು: ವಾಸನೆ ಶಬ್ದ ಬಣ್ಣ  ಇತ್ಯಾದಿ...?



ಯಾವುದು ಕತೆಯಾಗಬಹುದು? ಅಂತ ನಮ್ಮನ್ನು ನಾವೇ ಪ್ರಶ್ನಿಸಿಕೊಂಡರೆ ನಮಗೆ ಕತೆಗಳು ಸಿಗದೇ ಹೋಗಬಹುದು. ಆದರೆ, ಕತೆಗಾರನಿಗೆ ಸಿಕ್ಕಿದ್ದೆಲ್ಲವೂ ಕತೆಯೇ. ಮುಂಚೆ ಇದ್ದಂಥ ಕತೆಯ ಸ್ವರೂಪ, ಉದ್ದೇಶ, ರಚನಾ ತಂತ್ರ ಮತ್ತು ಅದರ ವಸ್ತುಗಳು ಕಾಲದ ಸ್ಪಂದನೆಗೆ ನಿರಂತರವಾಗಿ ರೂಪಾಂತರಗೊಳ್ಳುತ್ತಾ ಈಗಿನ ಕತೆಯ ಮಿಡಿತಗಳು ಬೇರೆಯದೇ ಆಗಿ ನಮಗೆ ಸಿಗುತ್ತವೆ. 'ಅಲ್ಲಿಗೆ ಎಲ್ಲ ಮುಗಿದು, ಅಲ್ಲಿ ಎಲ್ಲರೂ ಸುಖವಾಗಿದ್ದರು' ಎನ್ನುವ ಕತೆಗಳಿಂದ ಈಗ ನಾವು ಇನ್ನಷ್ಟು ವಿಸ್ತಾರವನ್ನು ಹುಡುಕಿ ಹೊರಟಿದ್ದೇವೆ. ಒಟ್ಟಾರೆ ಬದುಕಿಗಿಂತ, ಅದರಲ್ಲಿ ಇರುವ ಕ್ಷಣಗಳನ್ನು ಬಿಡಿಸಿಟ್ಟು, ಅವುಗಳ ಮುಖೇನ ಇಡೀ ಬದುಕನ್ನು ನೋಡುವ ಈ ಕ್ರಮವೂ ಒಂಥರಾ ಚೆಂದವೇ. ಬಹಳಷ್ಟು ಸಲ ಅನಿಸುವುದೇನೆಂದರೆ, ನಮ್ಮದೇ ಬದುಕಿನಿಂದ ಕತ್ತರಿಸಿ ತೆಗೆದ ಭಾಗಗಳಿಗೆ ಹಿಡಿದ ಕನ್ನಡಿಯೇ ಕತೆ. ಬಿಂಬಗಳು ನಾವು, ನೀವು ಯಾರೂ ಆಗಿರಬಹುದು. ಅದಕ್ಕಾಗಿಯೇ ಓದುಗ ಆ ಕಥಾ ಪರಿಸರದಲ್ಲಿ ತಾನು ಹೊಕ್ಕದೇ ಓದುತ್ತೇನೆಂದರೆ, ಆ ಕತೆ ಓದುಗನಲ್ಲಿ ಹೊಕ್ಕುವುದು ತುಸು ಕಷ್ಟವೇ! ಓದುಗನಲ್ಲಿ ಅದೆಂಥದ್ದೇ ಜ್ಞಾನವನ್ನು, ತಿಳಿವಳಿಕೆಯನ್ನು ಅದು ಬಿತ್ತಿದರೂ ಆ ಕ್ಷಣಕ್ಕೆ ಉಂಟಾಗುವ ಭಾವತೀವ್ರತೆಯೇ ಈ ಎಲ್ಲಾ ಕಥಾ ಪ್ರಪಂಚದ ಅಸ್ತಿತ್ವದ ಮೂಲ; ಇದು ಕೇವಲ ಕತೆಗಳಿಗೆ ಸೀಮಿತವಲ್ಲ, ಎಲ್ಲಾ ಕಲಾ ಪ್ರಕಾರಗಳಿಗೂ ಇದು ಸಮಂಜಸ ಅಂತನ್ನಬಹುದೇನೋ. ಬಹುತೇಕ ಎಲ್ಲ ಓದುಗರಿಗೂ ತಮ್ಮ ತಮ್ಮ ನಂಬಿಕೆಗಳ ಪ್ರಭಾವಲಯದಿಂದ ಆಚೆ ನಿಂತು ಈ ಹೊಸ ಪ್ರಪಂಚದಲ್ಲಿ ಸಂವಹಿಸುವುದು ಚೂರು ಕಷ್ಟವೇ, ಜೊತೆಗೆ ಅದು ಮನುಷ್ಯ ಸಹಜ ಗುಣ ಕೂಡಾ ಹೌದು. ನಮ್ಮ ನಮ್ಮ ಮನೋಧರ್ಮಕ್ಕೆ ತಕ್ಕಂತೆಯೇ ಅಲ್ಲವಾ ನಮ್ಮೆಲ್ಲ ಆಯ್ಕೆಗಳು ನಿಂತಿರುವುದು. ಸರಿ ತಪ್ಪುಗಳ ವಿಚಾರವಾಗಲೀ, ಅಥವಾ ದಕ್ಕುವಿಕೆಯ ಕುರಿತಾಗಿನ ವಿಚಾರಗಳಾಗಲೀ ಇಲ್ಲಿನ‌ ವ್ಯಾಪ್ತಿಯೊಳಗಿಲ್ಲ; ಅವು ಆಮೇಲೆ ಹುಟ್ಟಿಕೊಳ್ಳುವ ಸಂಗತಿಗಳು. 'ಯಾವುದು ಕತೆಯಾಗಬಲ್ಲದು' ಅನ್ನುವುದಕ್ಕೆ 'ಯಾವುದೂ ಕತೆಯಾಗಬಲ್ಲದು' ಅನ್ನುವುದೇ ಅತಿ ಹತ್ತಿರದ ಉತ್ತರವಾಗಬಹುದು ಅನಿಸುತ್ತದೆ; ಕತೆಯಾಗಿಸುವವರು ಬೇಕಷ್ಟೇ! ಹೀಗೆ ಮನುಷ್ಯಲೋಕದ ಸ್ವಭಾವಗಳನ್ನು ತೀರಾ ಹತ್ತಿರದಿಂದ, ಯಾವುದೇ ನಿರ್ಣಯಗಳನ್ನು ಹೇರದೇ ನೋಡುವ ಪ್ರಯತ್ನದ ಕಥಾ ಸಂಕಲನವೇ ಅಶೋಕ ಹೆಗಡೆಯವರ 'ವಾಸನೆ ಶಬ್ದ ಬಣ್ಣ ಇತ್ಯಾದಿ'. 


ಇಲ್ಲಿನ ಕಥಾ ಪಾತ್ರಗಳು ಹೊರಗಿನದಲ್ಲ, ಹಾಗಂತ ತೀರಾ ಒಳಗಿನದೂ ಅಲ್ಲ. ನಗರ, ಹಳ್ಳಿ ಇತ್ಯಾದಿಗಳು ಇದ್ದರೂ ಅವುಗಳಷ್ಟೇ ಅಲ್ಲ. ಇಲ್ಲಿ ಇವೆಲ್ಲವೂ ನಿಮಿತ್ತಗಳು ಹಾಗೂ ಆ ಪರಿಸರದ ಮನುಷ್ಯರು ಮತ್ತವರ ಮನಸ್ಥಿತಿಗಳೇ ಇಲ್ಲಿನ ಮುಖ್ಯ ಅಂಗ. ಇಂದ್ರಿಯಗಳು ವಾಸನೆ, ಶಬ್ದ, ಬಣ್ಣ, ರುಚಿ, ಸ್ಪರ್ಶ ಇತ್ಯಾದಿಗಳನ್ನು ಹೇಗೆ ಗುರುತಿಸುತ್ತವೆಯೋ ಹಾಗೇ ಅವು ಲೋಭ, ಮೋಹ, ಕಾಮ‌ ಇತ್ಯಾದಿಗಳನ್ನೂ ಉದ್ದೀಪಿಸುತ್ತವೆ. ಬಹುತೇಕ‌ ಎಲ್ಲಾ ಕತೆಗಳನ್ನು ಓದುವಾಗಲೂ ಪೂರ್ವಗ್ರಹಗಳಿಲ್ಲದೇ ಓದುವುದೇ ಅವುಗಳಿಗೆ ಕೊಡಬೇಕಾದ ಗೌರವ. ಬರೆಹಗಾರ ಬರೆಯುತ್ತಾ ಬರೆಯುತ್ತಾ ಮನುಷ್ಯನಾಗಬಹುದು, ಓದುಗ ಓದುತ್ತಾ ಓದುತ್ತಾ ಮನುಷ್ಯನಾಗಬಹುದು. ಇಂಥದ್ದೇ ಮನೋಭೂಮಿಕೆ ಈ ಕಥಾ ಸಂಕಲನದ ಕತೆಗಳಿಗೆ ಬೇಕು. ಪ್ರಾಪಂಚಿಕ ಸುಖ, ಮತ್ತದರ ತಲ್ಲಣಗಳನ್ನು ಪ್ರಾಮಾಣಿಕವಾಗಿ ತೆರೆದಿಡುತ್ತಾ, ನಿಜವಾದ ಮನುಷ್ಯ ಲೋಕದೊಳಗೆ ಲೇಖಕರು ನಮ್ಮನ್ನು ಕರೆದುಕೊಂಡು ಹೋಗುತ್ತಾರೆ. ಇಲ್ಲಿ ಸ್ವರೂಪವಿದೆ, ಕುರೂಪವಿದೆ. ಅದೆಂಥದ್ದೇ ಆದರೂ ಅದು ಮನುಷ್ಯನಿಗೇ ಸಂಬಂಧಪಟ್ಟಿದ್ದು ಅನ್ನುವುದು ಗಮನಿಸಬೇಕಾದ ಸಂಗತಿ. ಕಥಾ ಸಂಕಲನದ ಹೆಸರೇ ಹೇಳುವಂತೆ ಇಲ್ಲಿನ ಪ್ರತಿ ಪಾತ್ರಕ್ಕೂ ಅದರದ್ದೇ ಆದ ವಾಸನೆಯಿದೆ, ಬಣ್ಣ ಇದೆ ಹಾಗೂ ತನ್ನ ಇರುವಿಕೆಯನ್ನು ತೋರಿಸಿಕೊಳ್ಳುವ ಶಬ್ದವಿದೆ. ಅದರ ಜೊತೆಗೆ ಈ 'ಇತ್ಯಾದಿ'ಗಳಲ್ಲಿ ಅವ್ಯಕ್ತವಾದ ತಳಮಳ, ಅಸ್ಥಿರತೆ, ನೋವು, ತಲ್ಲಣಗಳೂ ಇವೆ. ಈ ಕಥಾ ಪ್ರಪಂಚದಲ್ಲಿ ಮಡಿವಂತಿಕೆಯಿಲ್ಲ; ಸಹಜವಾದ ವಾತಾವರಣವಿದೆ. ಇಲ್ಲಿನ ಎಲ್ಲ ಮಾತುಗಳೂ ಅಪರಿಚಿತ ಪ್ರಪಂಚದಿಂದ ಕದ್ದು ತಂದವುಗಳಲ್ಲ. ಅದೇ ಪರಿಸರದಲ್ಲಿ ಜೀವಿಸಿದ ಮಾತುಗಳವು. 


ಇಡೀ ಪುಸ್ತಕದ ತುಂಬಾ ಲೇಖಕರು ಭಾಷೆಯನ್ನು ಬಳಸಿಕೊಂಡ ರೀತಿ ಹಾಗೂ ಕೆಲವು ಚಿತ್ರಣಗಳನ್ನು ಕಟ್ಟಿಕೊಟ್ಟ ರೀತಿ ಕತೆಗಾರನ ಸೂಕ್ಷ್ಮಪ್ರಜ್ಞೆಯನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತವೆ. ಅದನ್ನು ಅನುಭವಿಸುವ ಸುಖಕ್ಕೆ ಮುಖದಲ್ಲೊಂದು ಮಂದಹಾಸ ಸುಳಿಯದೇ ಹೋಗುವುದಿಲ್ಲ! 'ಬೋಳು ತಲೆ ಮೇಲೆ ಹಾದ ರಕ್ತನಾಳಗಳನ್ನು ಇಷ್ಟಿಷ್ಟೆಯಾಗಿ ಉಬ್ಬಿಸುತ್ತಾ' ಅಂತ ಶಿವರಾಮಜ್ಜನ ಪಾತ್ರದ ಕುರಿತಾಗಿ ಹೇಳುತ್ತಾ ಹೋಗುವಾಗ ಹಣೆಯಿಂದ ಹಾದು ಹೋಗುವ ನಮ್ಮದೇ ರಕ್ತನಾಳಗಳು ಉಬ್ಬಿದ ಅನುಭವವಾಗುತ್ತದೆ.   'ನೆಲದ ಕಾಲನ್ನೇ ಬಿಡಿಸುವ' ಲೇಖಕರು, ಒಂದು ಪಾತ್ರವನ್ನು 'ನೆರಳಿನ ಸಹಿತ' ಮನೆಯಿಂದ ಆಚೆ ಹಾಕುತ್ತಾರೆ. ನೆರಳಿಗೆ ಸ್ವತಂತ್ರ ಅಸ್ತಿತ್ವವೇ ಇಲ್ಲ, ಆದರೂ ಹೊರಗೆಲ್ಲೋ ನಿಂತಾಗ ಅಪ್ಪಿ ತಪ್ಪಿ ಬೀಳಬಹುದಾದ ನೆರಳು ಕೂಡಾ ಮನಸ್ಸಿನೊಳಗೆ ಬೀಳದ ಹಾಗೆ ಹೊರಗೆ ಹಾಕುವುದೆಂದರೆ ಅದಕ್ಕೆ ಗಟ್ಟಿ ಮನಸ್ಸೇ ಬೇಕು! 


ಕಾಲ ಇದೆ, ಕಾಲ ಕಳೆಯುತ್ತಾ ಹೋಗುತ್ತದೆ. ಕಾಲ ತನ್ನದೇ ವ್ಯೋಮದಲ್ಲಿ ತನ್ನನ್ನೇ ತಾನು ಖಾಲಿಯಾಗಿಸಿಕೊಳ್ಳುತ್ತಲೋ ಅಥವಾ ಕಬಳಿಸುತ್ತಲೋ ಹೋಗುವ ಒಂದು ಪ್ರಕ್ರಿಯೆಯಂತೂ ಇದೆ. ಕೆಲವೊಮ್ಮೆ ನಮ್ಮ ಇಂದಿನ ದಿನಗಳು ಹಿಂದಿನ ದಿನಗಳ ನೋವಿಗೆ ಚೂರು ಉಪಶಮನ ನೀಡಬಲ್ಲವು. ಬಹುತೇಕ ನೆನಪುಗಳು ಮಾಸುತ್ತವೆ. ಇನ್ನು ಕೆಲವು, ನಮ್ಮ ಮನಸ್ಸಿನ ಸಮತೋಲನವನ್ನು ಆಗಾಗ ಏರುಪೇರಾಗಿಸುತ್ತವೆ ಹಾಗೂ ಅದರಿಂದ 'ಈ ಹೊತ್ತು' ಅನ್ನುವುದು ಕೂಡಾ ಜಾರಿಹೋಗುತ್ತದೆ. ಇದು ಕಾಲವೇ ಕಾಲವನ್ನು ತಿನ್ನುವುದಾ? ಅನ್ನುವ ಒಂದು ಕುತೂಹಲಕಾರಿ ಪ್ರಶ್ನೆಯೊಂದು 'ದಿನಗಳು ದಿನಗಳನ್ನು ತಿನ್ನುತ್ತಾ' ಅನ್ನುವ ವಾಕ್ಯದ ಮೂಲಕ ವ್ಯಕ್ತವಾಗಿದೆ.


ನಮ್ಮಲ್ಲಿ ಇವತ್ತಿಗೂ ಸ್ತ್ರೀಸಂವೇದನೆಯನ್ನು ಅರ್ಥಮಾಡಿಕೊಳ್ಳಬಲ್ಲ ಮನಸ್ಸುಗಳು ಕಡಿಮೆಯೇ. ಸಾಹಿತ್ಯದಲ್ಲಿ ಕೂಡಾ 'ಹೆಚ್ಚಿಗೆ' ಹೇಳುವುದಕ್ಕೆ ತುಸು ಕಷ್ಟವೇ. ಯಾವಾಗ ಪುರುಷ ತನ್ನ ಕಣ್ಣುಗಳಿಂದ ಸ್ತ್ರೀ ಸಂವೇದನೆಯಿರುವ, ಅವಳ ಭಾವಪ್ರಪಂಚವಿರುವ ಸಾಹಿತ್ಯವನ್ನು ನೋಡುತ್ತಾನೋ ಅಲ್ಲಿಗೆ ಅದನ್ನು ನೋಡುವ ಹಾದಿಯೇ ತಪ್ಪಿದಂತಾಗುತ್ತದಲ್ಲವಾ? ಇದನ್ನು 'ಅವಳ‌ ಕಣ್ಣು'ಗಳಲ್ಲೇ ಅವಳು 'ಹೇಳಿದ ಹಾಗೇ' ನೋಡಬೇಕು. ಆದರೆ ನಮಗೆ ದೃಷ್ಟಿಯೂ ಬೇರೆ, ದೃಷ್ಟಿಕೋನವೂ ಬೇರೆ; ಜಗದ ಸಹಜ ಸ್ವಭಾವ ಅನ್ನೋಣವೇ? ಚೂರಾದರೂ ಬದಲಾಗಬಹುದೇನೋ ತಿಳಿದಿಲ್ಲ.. ಇಲ್ಲಿನ ಕತೆಯಲ್ಲೊಂದು ಮಾತಿದೆ, "ನನ್ನ ಮೊಲೆ ಹಿಡಿದ ನಿನ್ನದೇ ಕೈಯಲ್ಲಿ ಎದೆ‌ ಸ್ವಲ್ಪ ಮುಟ್ಟಿ ನೋಡು ಮಾರಾಯಾ, ನೋವು ಅರ್ಥವಾದರೂ ಆದೀತೇ ನಿನ್ನ ಬೈನರಿ ಮೆದುಳಿಗೆ" 


ಮದುವೆಯಲ್ಲಿ ಗಂಡಿನ ಪಾದ ಸರಿಯಾಗಿ ತೊಳೆಯಲಿಲ್ಲವೆಂದು ಶುರುವಾದ ಜಗಳ ಮದುವೆ ಹೆಣ್ಣಿನ ಕಣ್ಣೀರಿನಲ್ಲೇ ಪಾದ ತೊಳೆಯಬೇಕಾದಲ್ಲಿಗೆ ಹೋಯಿತು ಅನ್ನುವಾಗ ಮುಂಚೆ ಇದ್ದ, ಈಗಲೂ ಬಹುತೇಕ ಕಡೆಗಳಲ್ಲಿ ಇರಬಹುದಾದ ದರ್ಪಕ್ಕೆ ಹಿಡಿದ ಕನ್ನಡಿಯೇ ಅಲ್ಲವಾ ಇದು? ಮುಖದಲ್ಲಿ ನೆರಿಗೆಗಳು ಬಹಳಷ್ಟಿವೆ, ತಿಕ್ಕಿ ತಿಕ್ಕಿ ತೆಗೆಯಲೇಬೇಕು ಬಿಡಿ! 


"ಈ ಸಮುದ್ರದ ನೀರಿನ ಮೇಲೆ ನಡೆಯುತ್ತಾ ಸಾಗಿದರೆ ಗೋಕರ್ಣದ ಕಡಲಿನ ದಂಡೆ ಸಿಗಬಹುದೇ.." ಆಸ್ಟ್ರೇಲಿಯಾದ ಸಮುದ್ರವೊಂದು ಗೋಕರ್ಣದ ಸಮುದ್ರದೊಂದಿಗೆ ಬೆಸೆದುಕೊಳ್ಳುವುದು ಹೀಗೆ. ದೂರದಲ್ಲೇ ಇದ್ದರೂ, ಮೂಲವನ್ನು ದೂರ ಎನ್ನುವ ಮಾಧ್ಯಮದ ಮೂಲಕವೇ ಮುಟ್ಟಬಹುದಾದ, ಅದರಿಂದ ತೆರೆದುಕೊಳ್ಳಬಹುದಾದ ನಾಳೆಗಳಿಗೆ ತೆರೆದುಕೊಳ್ಳುವುದೂ ಒಂದು ಚೆಂದವೇ ಅಲ್ಲವಾ?


ಹೀಗೆ ಇಲ್ಲಿನ‌ ಪ್ರತಿ ಕತೆಯೂ ನಮ್ಮದೇ ಲೋಕದ ಇನ್ನೊಂದು ಭಾಗವನ್ನು, ನಮ್ಮದೇ ಜಗತ್ತಿನ ಇತರ ಪಾತ್ರಗಳನ್ನು, ನಮ್ಮದೇ ಸ್ವಭಾವಗಳ ಇನ್ನಷ್ಟು ಮುಖಗಳನ್ನು ನಮ್ಮೆದುರು ಬಿಚ್ಚಿಡುತ್ತಾ ಹೋಗುತ್ತದೆ. ಕತೆ ಕಟ್ಟುವುದೂ ಒಂದು ಕಲೆ ಅಂತ ಒಪ್ಪುವುದಾದಲ್ಲಿ ಅದಕ್ಕೆ ಕೌಶಲವೂ ಬೇಕಲ್ಲವಾ? ಅಂಥ ಕೌಶಲ್ಯದ ನಿದರ್ಶನ ಅನ್ನುವಂತಿದೆ ಇಲ್ಲಿನ ಕಥನ ಶೈಲಿ, ಇಲ್ಲಿನ ವಾಕ್ಯಗಳು. ಇಲ್ಲಿನ ಕತೆಗಳನ್ನು ಓದಿದ ನಂತರ, "ಯಾವುದು ಕತೆಯಾಗಬಹುದು' ಅಂತ ಕೇಳಿದರೆ, ಮತ್ತೊಮ್ಮೆ ಸ್ಪಷ್ಟವಾಗಿ ಖಂಡಿತಾ ಹೇಳಬಹುದು " ಯಾವುದೂ ಕತೆಯಾಗಬಲ್ಲದು"


~`ಶ್ರೀ'

   ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ