ಮಂಗಳವಾರ, ನವೆಂಬರ್ 8, 2016

"ಕತೆಗಳು"...

ಇಲ್ಲೊಂದಿಷ್ಟು ಕತೆಗಳು
ಹೊರಟಿವೆ ವಾಯುವಿಹಾರಕ್ಕೆ..
ಪರಿಚಿತ ಅಪರಿಚಿತ
ಚರ್ಮಗಳ ತಾಳೆಹಾಕುತ್ತಾ
ಓಡುತ್ತವೆ ಒಮ್ಮೊಮ್ಮೆ..
ತಮ್ಮ ತಮ್ಮ ಮೈಕಟ್ಟುಗಳ
ರೂಪಿಸುತ್ತವೆ ಚೌಕಟ್ಟಿನಲ್ಲಿ..
ಇಟ್ಟುಕೊಳ್ಳುತ್ತವೆ ಹೆಸರನ್ನೂ
ನಾನು ನೀನು ಅವನೆಂದು..

ಹಾದಿಬದಿಯ ಮರಗಳ
ಕೊಂಬೆಗೆ ತೂಗುತ್ತಿತ್ತು
ಜೋಕಾಲಿ, ಮೊದಲೆಲ್ಲ..
ಲಾಲಿಹಾಡೊಂದು ಮೆಲ್ಲ
ನೆರಳಿಗಷ್ಟು ತಂಪೀಯುತ್ತಿತ್ತು..
ಹುಟ್ಟುಡುಗೆಯಲ್ಲಿ ಸೋಜಿಗವೊಂದು
ಮಲಗುತ್ತಿತ್ತು ಹಾಯಾಗಿ
ಹರಿದ ಸೀರೆಗಳಲ್ಲಿ ತೂರಿಬರುವ
ಬೆಳಕ ಕೋಲುಗಳನ್ನು ಅಪ್ಪಿಕೊಂಡು..

ಕವಲುಗಳು ಬಿದ್ದುಕೊಂಡಿವೆ
ನಡೆದಷ್ಟೂ ಉದ್ದಕ್ಕೆ..
ತೆಗೆದುಕೊಂಡದ್ದಷ್ಟೇ ತಿರುವೇ!
ಅಲ್ಲಲ್ಲಿ ಪೊದೆಗಳಲ್ಲಿ
ತರಚಿಕೊಂಡ ಊಹಾಪೋಹಗಳ
ಲೆಕ್ಕವಿಲ್ಲ; ಅನುಮಾನವಿದೆ
ಈಗಲೂ ರಕ್ತದ ಬಣ್ಣದ ಬಗ್ಗೆ!
ಅಂಗಿಗುಂಡಿಗಳೊಂದಷ್ಟು ಜೋಲುತ್ತವೆ
ದಾರದಿಂದ ಮುಕ್ತವಾಗುವ ಭ್ರಮೆಯಲ್ಲಿ..
ಖಾಯಂ ಆಗಿ ನೋಡುತ್ತದೆ ಗಾಳಿ
ಅಂಟಿಕೊಂಬುದರ ಸುಖ
ವಿರಹದ ಮುಖ..

ದೊಡ್ಡದಾಗುತ್ತಿದೆ ಕತೆ
ಇನ್ನಷ್ಟು ಕತೆ ಸೇರಿ..
ಎಲ್ಲರನ್ನೂ ಯಾರೋ ಅಟ್ಟಿಸಿ ಬಂದಂತೆ
ಇಲ್ಲಾ, ಎಳೆದುಕೊಂಡು ಹೋದಂತೆ..
ದಿಕ್ಕಿಲ್ಲದ ಹೆಜ್ಜೆ ಸಪ್ಪಳ!
ಹಾರುತ್ತವೆ ಕೂಗುತ್ತವೆ ಹಸಿಯುತ್ತವೆ
ಹಲುಬುತ್ತವೆ ನೆರಳು ಸಿಗಲೆಂದು
ಹುಡುಕುತ್ತವೆ ಕೊಂಬೆಗಳನ್ನು
ಜೋಕಾಲಿ ಕಟ್ಟಲೆಂದು..
ದೊಡ್ಡದಾಗುತ್ತಲೇ ಇವೆ ಕತೆಗಳು
ಮತ್ತೆ ಮತ್ತೆ ಅಳೆಯಲ್ಪಡುತ್ತದೆ
ಮುಗಿಲು, ಜೊತೆಗದರ ಬಗಲು...

~‘ಶ್ರೀ’
  ತಲಗೇರಿ