ಮಂಗಳವಾರ, ಅಕ್ಟೋಬರ್ 18, 2016

"ಶೇಷ"..


ಆತ `ಎಲ್ಲಿಗೆ' ಅಂದಾಗಲೆಲ್ಲಾ
ಒದ್ದಾಡುತ್ತೇನೆ ಗೊತ್ತಾಗದೇ..
ಒಂದಿಷ್ಟಗಲದ ಚೀಟಿಯಲ್ಲಿ
ಬೆಲೆಯ ಅಚ್ಚೊತ್ತುತ್ತಾರೆ
ಅಂದಾಜಿಸಿದ ಆ ಉದ್ದಕ್ಕೆ..
ಕೆಲವೊಮ್ಮೆ ಉಳಿದು ಬಿಡುತ್ತವೆ
ಮಿಕ್ಕಿದ ಚಿಲ್ಲರೆಗಳು ಬೆಚ್ಚಗೆ..

ಬಸ್ಸಿನ ಫಲಕಗಳನ್ನು
ನೋಡಿದೊಡನೆ, ಗಮ್ಯವನ್ನೇ
ಬಾಚಿ ಎದೆಗಪ್ಪಿಕೊಂಡಷ್ಟೇ
ಸಂಭ್ರಮಿಸುತ್ತಾರೆ; ನನಗನಿಸುತ್ತದೆ
ನನಗೂ ಒಂದು ಫಲಕ ಬೇಕಿತ್ತು
ಓದುತ್ತಿದ್ದರು ನನ್ನನ್ನೂ ಯಾರೋ..

ಗಡ್ಡ ಕೆರೆಯುತ್ತಾ ಆಕಳಿಸಿ
ನೊಣಗಳ ರೆಕ್ಕೆ ಸದ್ದಿಗೆ
ಕಿವಿಯಾಗುತ್ತಾನೆ ಆತ..
ಅರ್ಧ ತಿಂದಿಟ್ಟ ಇಡ್ಲಿಗೆ
ಏನೋ ಹೇಳುವ ಹಸಿವು..
ವಿಳಾಸ ಕೇಳಲು ಬಂದವರ ಇದಿರು
ಅಕ್ಷರಗಳು ಅರ್ಧ ಸಾಯುತ್ತವೆ
ಮತ್ತದೇ ಆಕಳಿಕೆಯಲ್ಲಿ..
ಬಚಾವಾದವುಗಳು ಪುಕ್ಕಟೆಯಾಗೇ
ಬಿಕರಿಯಾಗುತ್ತವೆ..

ಎಷ್ಟೋ ಊರಿನ ಸುದ್ದಿ ಮೂಟೆಗಳು
ಜಮಾಗೊಳ್ಳುತ್ತವೆ ತಾತ್ಕಾಲಿಕ ಶಿಬಿರಗಳಲ್ಲಿ..
ಸವೆಯುತ್ತವೆ ಬಸ್ಸಿನ ಚಪ್ಪಲಿಗಳು,
ಕೇಳಬೇಕೆಂದಿದ್ದೆ, ಹಾದಿಯ ಕತೆಯೇನು!
ಗಾಳಿಸುದ್ದಿ; ಪಾತ್ರಗಳು ಅಲೆಯುತ್ತವಂತೆ..

ಆಗಷ್ಟೇ ಪರಿಚಯವಾಗಬೇಕಿದ್ದ ಚಿಟ್ಟೆ
ಹಾರಿಹೋಗುತ್ತದೆ ಹೆಗಲ ಪಕ್ಕದಲ್ಲೇ..
ಚಪ್ಪಾಳೆ, ಪ್ರೋತ್ಸಾಹಿಸಲೆಂದು ತಿಳಿದಿಲ್ಲ ಅದು..
ಕಚಗುಳಿಯಿಡುತ್ತಿಲ್ಲ ಜಂಗಮವಾಣಿಯಲ್ಲಿ
ಹುಡುಕಿಕೊಂಡ ಪಾತರಗಿತ್ತಿಯ ಚಿತ್ರ..

ಬಣ್ಣ ಕಿತ್ತ ಬರಹಗಳು ಅವಳ ಹೆಸರಲ್ಲಿ
ಆಸನದ ಹಿಂಬದಿಗೆ ಅಥವಾ ತಗಡಿಗೆ..
ಹೀಗೆಲ್ಲಾ ಗೋರಿ ಕಟ್ಟಬಹುದಂತೆ
ನೆನಪುಗಳಿಗೆ!
ಅದ್ಯಾರು ತಂದು ಬಿಟ್ಟುಹೋದವರು
ಆಸೆಗಳ ತುರುಬಲ್ಲಿ ಇಷ್ಟಿಷ್ಟೇ
ನಿನ್ನೆಗೆ ಜಾರಿದ ಮೌನದ ಸುಕ್ಕನ್ನು..

ಮರೆಯಬೇಡಿ, ನಿಮ್ಮ ಕಣ್ಣುಗಳ
ಹೊಕ್ಕಿನೋಡುವ ಚಾಳಿಯಿದೆ ನನಗೆ..
ಕಣ್ಣೀರು ತಂಗಿದ್ದು ನಗುವೊಂದು ತೇಲಿದ್ದು
ತಿಳಿಯುವುದು ಹೇಳದೆಯೇ..
ಏನೆಲ್ಲ ಬದಲಾದರೂ
ನೆರಳುಗಳಿಗೆ ಏಕತಾನತೆ..
ಹೊಸ ಬಟ್ಟೆ ತೊಟ್ಟ ಮಾತ್ರಕ್ಕೆ
ನನ್ನಲ್ಲೂ ಗೊಂದಲವಿಲ್ಲವೆಂದೇನಲ್ಲ..!

ಎಷ್ಟೋ ಸಲ ಹೇಳಿಯೇ ಇಲ್ಲ;
ನಮ್ಮೊಳಗೂ ಒಬ್ಬ ಹುಚ್ಚನಿದ್ದಾನೆ
ಜೋಪಾನವಾಗಿಟ್ಟುಕೊಳ್ಳಿ..ಹಾಗೆಯೇ..
ಹೆದ್ದಾರಿಯಲ್ಲಿ ಗಸ್ತು ತಿರುಗುವಾಗ
ನಮ್ಮ ಡ್ರೈವರಿನ ನಗೆಯೊಂದು
ಕಳೆದುಹೋಗಿದೆಯಂತೆ, ಎಂಜಿನ್ನಿನ
ಸದ್ದುಗಳ ಬಿಸಿಯ ಏದುಸಿರಿಗೆ ಮುರುಟಿ..
ಹುಡುಕಿಕೊಡಬೇಕು
ಚೂರು ಸಹಕರಿಸಿ..

~`ಶ್ರೀ'
    ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ